ಭಾಗ ೫ - ಬಾವಿ
ಆ ಭಯಂಕರ ಶಬ್ದ ಯಾವುದೆಂದು ಹಿಂತಿರುಗಿ ನೋಡಿದರೆ ಕಣ್ಣಿಗೆ ಕಂಡರೂನಂಬಲಾರದಂತಹ ದೃಶ್ಯ. ಬೃಹದಾಕಾರದ ಆವಿಯೊಂದು ವಿಕಾರವಾದ ರೂಪವನ್ನು ತಾಳಿತ್ತು . ಇದು ನಿಜವೋ ಅಥವಾ ಭ್ರಮೆಯೋ ಎನ್ನುವುದು ಇಬ್ಬರಿಗೂ ತಿಳಿಯದಾಯಿತು. ಕರ್ಕಶವಾದ ಧ್ವನಿಯೊಂದು ಪ್ರತಿಧ್ವನಿಸಲು ಶುರುವಾಯಿತು.ರೇಷ್ಮಾ ತನ್ನ ಕೈಯ್ಯಲ್ಲಿದ್ದ ಪಿಸ್ತೂಲಿನ ಟ್ರಿಗರ್ ಒತ್ತಿಯೇ ಬಿಟ್ಟಳು
ಈ ಬಾರಿ ಆಕೆಯ ಅದೃಷ್ಟ ಚೆನ್ನಾಗಿತ್ತೋ ಏನೋ ಎಂಬಂತೆ ಪಿಸ್ತೂಲಿನಿಂದ ಬುಲೆಟ್ಟ್ ಜಿಗಿದೇ ಬಿಟ್ಟಿತು. ಬುಲೆಟ್ ಹಾರುವ ಶಬ್ದಕ್ಕೆ ಇಬ್ಬರೂ ಹೆದರಿ ಒಂದು ಅಡಿ ಹಿಂದೆ ಜಿಗಿದರು. ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಬೃಹಾದಾಕಾರದ ಆವಿಯು ಮಾಯವಾಗಿತ್ತು. ಅತ್ತ ದರಿ ಇತ್ತ ಪುಲಿ ಎಂಬ ಸ್ಥಿತಿಯಲ್ಲಿದ್ದ ಇವರಿಗೆ ಅತ್ತ ಕಡೆಯಿಂದ ಕಾಣುತಿದ್ದ ಬೆಳಕೂ ಮರೆಯಾಯ್ತು. ಸುತ್ತಲೂ ಅಂಧಕಾರ ಆವರಿಸಿತ್ತು , ಮೊಬೈಲ್ ಫೋನ್ ತೆಗೆದು ನೋಡಿದರೆ ನೆಟ್ವರ್ಕ್ ಮಂಗಾ ಮಾಯವಾಗಿತ್ತು. ಮೊಬೈಲ್ ಫೋನಿನ ಟಾರ್ಚ್ ಲೈಟ್ ಆನ್ ಮಾಡಿದ ಕೂಡಲೇ ತುಸು ದೂರದಲ್ಲಿ ಎರಡು ಕಂಬಗಳ ಮಧ್ಯೆ ಝಲ್ ಝಲ್ ಎಂಬ ಶಬ್ದವು ಕೇಳ ತೊಡಗಿತು, ಇಬ್ಬರೂ ಅತ್ತ ಕಡೆ ಗಮನ ಹರಿಸಿ ಮುಂದೆ ಹೋದರು, ಚಾಂದಿನಿಯು ರೇಷ್ಮಾಳನ್ನು ಹಿಂಬಾಲಿಸುತ್ತಾ ಹೋದಳು. ಸನಿಹವಾಗುತ್ತಿದ್ದಂತೆ ಶಬ್ದವು ಜೋರಾಗಿ ಕೇಳತೊಡಗಿತು. ಇನ್ನೇನು ಸನಿಹವಾದೆವು ಎನ್ನುವಷ್ಟರಲ್ಲಿ ರೇಷ್ಮ ಅಯ್ಯೋ ಎಂದು ಬೊಬ್ಬಿಟ್ಟಳು.
ಎರಡು ಕಂಬಗಳ ಮಧ್ಯೆ ಆಳವಾದ ಬಾವಿ. ಆ ಬಾವಿಗೆ ಗೋಡೆಯಿರಲಿಲ್ಲ. ಒಂದು ದಪ್ಪನೆಯ ಕಬ್ಬಿಣದ ಸರಳು ಕಂಬಗಳ ನಡುವೆ ಹಾದುಹೋಗಿತ್ತು, ಆ ಸರಳಿನಲ್ಲಿ ಒಂದು ರಾಟೆಯನ್ನು ನೇತು ಹಾಕಲಾಗಿತ್ತು , ಇಂದು ಸಾಯುತ್ತೇನೋ ನಾಳೆ ಸಾಯುತ್ತೇನೋ ಎಂದು ಅಳುತ್ತ ಕುಳಿತ ಹಳೆಯ ಹಗ್ಗವೊಂದು ಆ ರಾಟೆಯಲ್ಲಿ ನೇತಾಡುಡ್ತಿತ್ತು.
ರೇಷ್ಮಾ ಈ ಗೋಡೆಯಿಲ್ಲದ ಬಾವಿಯನ್ನು ಗಮನಿಸಿರಲಿಲ್ಲ , ಹೀಗಾಗಿ ಆಯ ತಪ್ಪಿ ಬಾವಿಗೆ ಬೀಳುವಷ್ಟರಲ್ಲಿ ಆಕೆ ರಾಟೆಯನ್ನು ಹಿಡಿದು ಕೊಂಡಿದ್ದಳು . ಅದೃಷ್ಟವಶಾತ್ ಆಕೆ ಆ ಬಾವಿಗೆ ಬೀಳಲಿಲ್ಲ , ಒಂದು ವೇಳೆ ಬಿದ್ದಿದ್ದರೆ ಉಳಿಯುತ್ತಿರಲಿಲ್ಲ. ಆಳವಾದ ಬಾವಿಯಲ್ಲಿ ಮೃತ ದೇಹದ ಎಲುಬುಗಳು ತನ್ನ ಹೊಳಪನ್ನು ಕಳೆಯದೆ ಪಳ ಪಳನೆ ಹೊಳೆಯುತ್ತಿದ್ದವು.ರಾಟೆಯಲ್ಲಿ ನೇತಾಡುತಿದ್ದ ಹಗ್ಗ ಬಾವಿಯೊಳಕ್ಕೆ ಬಿದ್ದೆ ಬಿಟ್ಟಿತು. ಆದರೆ ಆಕೆಯ ಜೀವ ಉಳಿಯಬೇಕಾದರೆ ಯಾರನ್ನು ಕೊಲ್ಲಬೇಕೆಂದು ಬಯಸಿದ್ದಳೋ ಆಕೆ ಸಹಕರಿಸಲೇ ಬೇಕು. ತನ್ನ ಜೀವವನ್ನು ಕಾಪಾಡು ಎಂದು ಚಾಂದಿನಿಯೊಡನೆ ಪರಿ ಪರಿಯಾಗಿ ಕೇಳತೊಡಗಿದಳು .
ರೇಶ್ಮಾಳಿಗೆ ಸಹಾಯ ಮಾಡಲು ಚಾಂದಿನಿಯು ಮುಂದಾದಳು. ಅಲ್ಲೇ ಇದ್ದ ಕೆಲ ಕಬ್ಬಿಣದ ಸರಳುಗಳನ್ನು ಕೈಗೆತ್ತಿ ಬಾವಿಗೆ ಅಡ್ಡನಾಗಿ ಇಟ್ಟಳು, ಒಂದು ಮೂಲೆಯಲ್ಲಿ ಬಿದ್ದಿದ್ದ ಹಳೆಯ ಏಣಿಯೊಂದನ್ನು ಎತ್ತಿಕೊಂಡು ಒಂದು ತುದಿಯನ್ನು ಬಾವಿಯ ಕಂಬದ ಸರಳಿಗೆ ಇಟ್ಟಳು, ಒನ್ನೊಂದು ತುದಿಯನ್ನು ತಾನು ನಿಂತ ಕಡೆ ಇಟ್ಟಳು . ನಿಧಾನವಾಗಿ ರೇಶ್ಮ ತನ್ನೆರಡು ಕಾಲುಗಳನ್ನು ಏಣಿಯಲ್ಲಿಟ್ಟು ಕೆಳಗಿಳಿಯಲು ಪ್ರಯತ್ನಿಸಿದಳು, ಆದರೆ ಏಣಿಯು ಕೊಂಚ ಕೊಂಚವಾಗಿ ಜಾರತೊಡಗಿತು , ಆಯ ತಪ್ಪಿದರೆ ಇಬ್ಬರೂ ಬಾವಿಯೊಳಗೆ ಬೀಳುವುದು ಖಚಿತ.
ಏಣಿಯು ಜಾರುತ್ತ ಇನ್ನೇನು ಬಾವಿಯೊಳಗೆ ಬೀಳುವಷ್ಟರಲ್ಲಿತ್ತು,ಚಾಂದಿನಿಯು ಜೋರಾಗಿ ಕಿರುಚಿದಳು. ಈ ಜೋರಾದ ಕಿರುಚಾಟದಿಂದಾಗಿ ರೇಶ್ಮಾಳು ಏಣಿಯಿಂದ ಛಂಗನೆ ಹಾರಿದಳು.ಇಬ್ಬರೂ ನಿಟ್ಟುಸಿರು ಬಿಟ್ಟು ಅಲ್ಲಿಂದ ಓಟಕಿತ್ತರು.
ಓಡುವುದಾದರೂ ಎಲ್ಲಿಗೆ? ಸುತ್ತಲೂ ಕವಿದ ಕತ್ತಲೆ , ನಿಶಾಚರಿಗಳ ತಾಂಡವ ನರ್ತನ, ಅಗೋಚರ ಶಕ್ತಿಗಳ ಮಾಯಾಜಾಲ , ಇವೆಲ್ಲದರ ನಡುವೆ ಬಲೆಯಲ್ಲಿ ಸಿಲುಕಿಕೊಂಡ ಮೀನಿನಂತೆ ವಿಲ ವಿಲ ಒದ್ದಾಡುತ್ತಿರುವ ಈ ಎರಡು ಬಡ ಜೀವಗಳು ತಮ್ಮ ಜೀವವನ್ನು ರಕ್ಷಿಸಿಕೊಳ್ಳಲು ಹರಸಾಹಸ ಮಾಡುತ್ತಿವೆ. ಪಂಜರದಲ್ಲಿ ಕೂಡಿಟ್ಟ ಹಕ್ಕಿಯಂತೆ ಹೊರ ಪ್ರಪಂಚವನ್ನು ನೋಡಲು ಬಾಗಿಲುಗಳ ತೆರೆಯುವಿಕೆಯನ್ನು ಕಾಯುತ್ತ ನಿಂತಿವೆ.
ಹೃದಯ ಬಡಿತವು ಇನ್ನೂ ಜೋರಾಗಿ ಬಡಿಯುತಿತ್ತು , ಎಷ್ಟೇ ಸಿರಿವಂತನಾಗಿದ್ದರೂ ಭಗವಂತನ ಈ ಸೃಷ್ಟಿಯಲ್ಲಿ ಸಾವು ಎಂಬುದು ಯಾವ ಭೇದ ಭಾವವನ್ನು ತೋರುವುದಿಲ್ಲ. ಈ ಪಾಳು ಬಿದ್ದ ಕಟ್ಟಡದೊಳಗೆ ರಾತ್ರಿ ಕಳೆಯುವುದು ದೂರದ ಮಾತು, ಏಕೆಂದರೆ ನಿಶಾಚರಿಗಳ ಕ್ರಿಯೆಗಳು ರಾತ್ರಿ ಸಮಯದಲ್ಲಿ ತೀವ್ರವಾಗಿರುತ್ತದೆ.
ಸಮಯ ನಿಲ್ಲಲಿಲ್ಲ , ಸಂಜೆಯ ೬ ಗಂಟೆಯಾಗಿತ್ತು. ಇಬ್ಬರೂ ಹಸಿವೆಯೇನೆಂಬುದನ್ನು ಮರೆತು ಈ ಮೃತ್ಯು ಕೂಪದಿಂದ ಹೊರ ಹೋಗುವ ಬಗ್ಗೆ ಯೋಚಿಸುತ್ತಿರುವಾಗ ರೇಷ್ಮಾಳ ಕಣ್ಣಿಗೆ ಬಿದ್ದಿದ್ದು ಬಾವಲಿಗಳ ವಿಚಿತ್ರ ವರ್ತನೆ. ಹೌದು , ಸಂಜೆಯಾಗಿದ್ದರಿಂದ ಬಾವಲಿಗಳು ಆಹಾರವನ್ನರಸುತ್ತ ಕಟ್ಟಡದ ಹೊರಗೆ ಹೋಗುತ್ತಿದ್ದವು.
ಇದನ್ನು ಗಮನಿಸಿದ ರೇಷ್ಮ ಬಾವಲಿಗಳನ್ನು ಹಿಂಬಾಲಿಸಿದಳು , ಆಕೆಯ ಹಿಂದೆಯೇ ಚಾಂದಿನಿಯು ಕೂಡ ಹೊರಟಳು. ರೇಷ್ಮಾಳ ಊಹೆಯು ನಿಜವಾಗಿತ್ತು. ಬಾವಲಿಗಳು ಇವರೀರ್ವರಿಗೆ ಕಾರ್ಮೋಡಗಳ ಘರ್ಷಣೆಯಿಂದುಂಟಾದ ಪ್ರಬಲ ಮಿಂಚಿನ ಬೆಳಕಿನಂತೆ ದಾರಿ ದೀಪವಾದವು. ಕೊನೆಗೂ ಈ ಪಾಳು ಬಿದ್ದ ಕಟ್ಟಡದಿಂದ ಮುಕ್ತಿ ಲಭಿಸಿತು. ಏನೂ ಸಾಧಿಸದಿದ್ದರೂ ಇಬ್ಬರ ಮುಖದಲ್ಲೂ ಸಂತೋಷವೆಂಬುದು ಉಕ್ಕಿ ಹರಿಯುತಿತ್ತು. ಜೀವದ ಮೌಲ್ಯ ಏನೆಂಬುದು ರೇಶ್ಮಾಳಿಗೆ ಅರಿವಾಗಿರಬಹು.
ಕೊಳಕಾದ ಬಟ್ಟೆ , ಅಸ್ತವ್ಯಸ್ತಗೊಂಡ ಕೂದಲುಗಳು ,ಗಬ್ಬು ವಾಸನೆ ಬರುವ ದೇಹ ಭಿಕ್ಷುಕರಿಗಿಂತಲೂ ಕೆಟ್ಟದಾಗಿ ಕಾಣುತಿತ್ತು.ಇಬ್ಬರ ಮನದಲ್ಲೂ ಬಹಳಷ್ಟು ಪ್ರಶ್ನೆಗಳು ಕಾಡುತಿದ್ದವು. ರಹಸ್ಯವಿದೆ ಎಂದವಳ ಮನದಲ್ಲಿ ಪಾಳು ಬಿದ್ದ ಕಟ್ಟಡದ ಬಗ್ಗೆ ಬಹಳಷ್ಟು ಪ್ರಶ್ನೆಗಳು ಉದ್ಭವವಾಗ ತೊಡಗಿದವು ಹಾಗೆಯೇ ಕೂತೂಹಲವನ್ನೂ ಕೆರಳಿಸಿದವು. ರೇಷ್ಮ ಯಾಕೆ ಪಿಸ್ತೂಲು ತಂದಳೆಂಬ ಚಾಂದಿನಿಯ ಪ್ರಶ್ನೆಗೆ ಉತ್ತರ ಸಿಗಲೇ ಇಲ್ಲ, ಈ ಪ್ರಶ್ನೆಯನ್ನು ಕೇಳುವ ಸಾಹಸವನ್ನೂ ಆಕೆ ಮಾಡಲಿಲ್ಲ. ಅರ್ಧ ದಾರಿ ತಲುಪುವಾಗಲೇ ಇಬ್ಬರ ಮನದಲ್ಲೂ ಮನೆಯಲ್ಲಿ ಏನು ಹೇಳುವುದೆಂಬುದರ ಚಿಂತೆ ಕಾಡ ತೊಡಗಿತು. ಅದಾಗಲೇ ಚಾಂದಿನಿಯ ಫೋನ್ ರಿಂಗಣಿಸಿತು. ಅದು ಆಕೆಯ ಪ್ರಿಯಕರನ ಕರೆಯಾಗಿತ್ತು. ಮುಂಜಾನೆಯಿಂದ ಆತ ಬಹಳಷ್ಟು ಕರೆಗಳನ್ನು ಮಾಡಿದ್ದ , ಆದರೆ ವ್ಯಾಪ್ತಿ ಪ್ರದೇಶದಿಂದ ದೂರವಿದ್ದ ಕಾರಣ ಚಾಂದಿನಿಯ ಫೋನ್ಗೆ ಆತನ ಕರೆಗಳು ಲಭ್ಯವಾಗಲೇ ಇಲ್ಲ. ಕರೆಯನ್ನು ಸ್ವೀಕರಿಸುದುದೇ ತಡ ಇಬ್ಬರು ಪ್ರೇಮಿಗಳು ಗುಸು ಗುಸು ಮಾತನಾಡಲು ಶುರು ಮಾಡಿದರು, ಅಷ್ಟರಾಗಲೇ ಅವಳ ಮನೆ ಸಮೀಪಿಸಿತ್ತು, ಕಾರಿನಿಂದ ಇಳಿದು ರೇಶ್ಮಾಳಿಗೆ ಧನ್ಯವಾದ ಹೇಳಿ ತನ್ನ ಮನೆಯತ್ತ ನಡೆದಳು. ಕತ್ತಲು ಆವರಿಸಿದ್ದರಿಂದ ಮನೆಯಲ್ಲಿ ಏನನ್ನುತ್ತಾರೋ ಎಂಬ ಗಾಢಯೋಚನೆಯಲ್ಲಿ ರೇಷ್ಮ ತನ್ನ ಕಾರನ್ನು ಚಲಾಯಿಸುತ್ತಾ ಮನೆಯ ಹಾದಿ ಹಿಡಿದಳು.
ಸಮಯ ೭.೩೦ , ಮನೆಯ ಆವರಣ ತಲುಪುತ್ತಲೇ ಆಕೆಯ ತಾಯಿ ಹಾಗೂ ತಂಗಿಯಂದಿರು ಈಕೆಯನ್ನು ಕಂಡು ವಿಚಲಿತಗೊಂಡರು. ಪ್ರಶ್ನೆಗಳ ಸುರಿಮಲೆಯು ಸುರಿಯಲಾರಂಭಿಸಿತು. ಅದ್ಯಾವುದಕ್ಕೂ ಕಿವಿಗೊಡದೆ ಎಲ್ಲವನ್ನೂ ಸವಿವರವಾಗಿ ತಿಳಿಸುತ್ತೇನೆ ಆದರೆ ತಂದೆಗೆ ಏನೂ ತಿಳಿಸಬೇಡಿ ಎಂದು ಹೇಳುತ್ತಾ ತನ್ನ ಕೋಣೆಯೊಳಗೆ ಹೋಗಿ ಬಾಗಿಲು ಮುಚ್ಚಿದಳು. ಅಕ್ಕನ ಸ್ಥಿತಿಯನ್ನು ನೋಡಿ ರೀನಾಳಿಗೆ ತುಂಬಾ ಬೇಸರವಾಗಿತ್ತು.
ಜೆರಾಲ್ಡ್ಇನ್ನೂ ಬಂದಿರಲಿಲ್ಲ. ರೇಷ್ಮ ಸ್ನಾನ ಮುಗಿಸಿ , ಊಟ ಮಾಡಲು ಕುಳಿತಿರುವಾಗ ಸ್ನೇಹಿತೆಯ ಮನೆಯಲ್ಲಿ ಚಿಕ್ಕದಾದ ಗಲಾಟೆಯಾದುದರಿಂದ ತನ್ನ ಬಟ್ಟೆ ಕೊಳಕಾಯಿತೆಂದು ಹೇಳಿ ಮನೆಯವರೆಲ್ಲರನ್ನೂ ಸಮಾಧಾನ ಪಡಿಸಿದಳು.ಊಟ ಮುಗಿಸಿ ಎಲ್ಲರೂ ತಮ್ಮ ತಮ್ಮ ಕೋಣೆಗೆ ಹೋಗಿ ಮಲಗಿದರು . ಆದರೆ ರೇಶ್ಮಾಳಿಗೆ ನಿದ್ದೆ ಹಚ್ಚಲೇ ಇಲ್ಲ.
ಚಾಂದಿನಿಯು ತನ್ನ ಜೀವವನ್ನು ಉಳಿಸಿದರೂ, ರೇಷ್ಮ ಆಕೆಯನ್ನು ಕೊಲ್ಲುತ್ತಾಳೋ ಅಥವಾ ತನ್ನ ಕುಟುಂಬದಿಂದ ಆಕೆಯನ್ನು ದೂರವಿಡುತ್ತಾಳೋ ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ಚಾಂದಿನಿಯು ಜೆರಾಲ್ಡ್ನ ಹಿಂದೆ ಬಿದ್ದಿರುವುದು ಆತನ ಪ್ರೀತಿಗಾಗಿಯೋ ಅಥವಾ ಆಸ್ತಿಗಾಗಿಯೋ ಎಂಬುದು ಇನ್ನೂ ನಿಖರವಾಗಿ ತಿಳಿದಿಲ್ಲ.
Bạn đang đọc truyện trên: Truyen247.Pro