ಭಾಗ ೪ -ಮೃತ್ಯು ಕೂಪ
ಮುಂಜಾವದ ೬ ಗಂಟೆ, ವಸಂತ ಮಾಸದ ಬರುವಿಕೆಯನ್ನು ಕಾಯುತ್ತಿರುವ ಹಕ್ಕಿಗಳು , ಇನ್ನೇನೋ ಸಂಭ್ರಮಿಸುವ ದಿನಗಳು ಹತ್ತಿರವಾಗುತ್ತಿದೆಯೊಂದು ಬೀಗುತ್ತಿರುವ ಗಿಡ ಮರಗಳು , ಕಾಣದ ಮಾವಿನ ಮರವನ್ನು ಅರಸುತ್ತ ಅಲೆದಾಡುತ್ತಿರುವ ಕೋಗಿಲೆಗಳು, ಬಿಲಿಯನ್ ಗಟ್ಟಲೆ ವರುಷಗಳಾದರೂ ತನ್ನ ಯವ್ವನವನ್ನ ಕಾಪಾಡುತ್ತಾ ಬಂದಿರುವ ಭೂಮಿ ತಾಯಿ, ಇವೆಲ್ಲದರ ಮಧ್ಯೆ ಕರ ಕರ ಎಂದು ಅರಚುತ್ತಿರುವ ಮರದ ಮರೆಯಲ್ಲಿ ಕುಳಿತ ಕಾಗೆ. ಈ ಕಾಗೆಯ ಕರೆಘಂಟೆಗೆ ನಿಧಾನವಾಗಿ ಎದ್ದಳು ಹಠಮಾರಿ ಹೆಣ್ಣು ರೇಷ್ಮಾ. ಮನದಲ್ಲಿ ಏನೋ ತಳಮಳ , ಎಂದೂ ಕಾಣದ ಭೀತಿ, ಗೊಂದಲ , ಇವೆಲ್ಲವೂ ಆಕೆಯ ಮುಖದಲ್ಲಿ ಎದ್ದು ಕಾಣುತಿತ್ತು.
ರೇಷ್ಮಾ ಎಂದಿಗಿಂತ ತುಸು ಬೇಗನೆ ಎದ್ದು ಎಲ್ಲ ಕೆಲಸಗಳನ್ನು ಮುಗಿಸಿ ತನ್ನನ್ನು ತಾನು ಅಲಂಕಾರ ಮಾಡಲು ಕನ್ನಡಿಯ ಮುಂದೆ ಕುಳಿತಳು. ತನ್ನಿಬ್ಬರು ತಂಗಿಯರು ಇನ್ನೂ ಮಂಚದಿಂದ ಎದ್ದಿರಲಿಲ್ಲ . ಈಕೆಯ ವಿಚಿತ್ರ ವರ್ತನೆಯನ್ನು ನೋಡಿ ತಾಯಿಗೆ ಏನೋ ಅನುಮಾನವಾಯಿತು, ಆದರೂ ಏನೂ ಅನ್ನದೆ ಸುಮ್ಮನಿದ್ದರು. ರೇಷ್ಮಾ ಶೃಂಗಾರಗೊಂಡು ಒಳ್ಳೆಯ ಬಲಿತ ದಾಳಿಂಬೆ ಹಣ್ಣಿನಂತೆ ಹೊಳೆಯುತಿದ್ದಳು . ಕಣ್ಣಿಗೆ ಮಸ್ಕಾರ , ತುಟಿಗೆ ಗುಲಾಬಿ ಬಣ್ಣದ ಅಧರ ಲೇಪಕ , ಕಂದು ಮಿಶ್ರಿತ ಹಸಿರು ಬಣ್ಣದ ನಿಲುವಂಗಿ , ಸುರುಳಿ ಕಟ್ಟಿರುವ ಆ ಕೂದಲುಗಳು ಆಕೆಯ ಬಾಹ್ಯ ಸೌಂದರ್ಯವನ್ನು ಇನ್ನೂ ಹೆಚ್ಚಿಸಿತ್ತು . ಕುತೂಹಲ ತಾಳಲಾರದೆ ಹಸೀನಾ ಕೇಳಿಯೇ ಬಿಟ್ಟಳು " ಇಷ್ಟು ಬೇಗ ಎಲ್ಲಿಗೆ ಹೊರಟಿದ್ದೀಯ?". ತನ್ನ ಸ್ನೇಹಿತೆಯ ಹುಟ್ಟು ಹಬ್ಬದ ಸಂಭ್ರಮಾಚರಣೆಯನ್ನು ಆಚರಿಸಲು ಹೋಗುತ್ತೇನೆ ಎಂದು ಹೇಳುತ್ತಾ , ತಂದೆಯ ಮಲಗುವ ಕೋಣೆಗೆ ಹೋಗಿ ಅದೇನೋ ವಸ್ತುವನ್ನು ತನ್ನ ಬ್ಯಾಗಿನೊಳಗೆ ಹಾಕಿಕೊಂಡು ಹೊರ ನಡೆದಳು . ಆಕೆಯ ಡ್ರೈವರ್ ಇನ್ನೂ ಬಂದಿರಲಿಲ್ಲ, ಆಕೆಗೆ ಇತ್ತೀಚೆಗಷ್ಟೇ ವಾಹನ ಚಲಾಯಿಸುವ ಪರವಾನಿಗೆ ದೊರೆತಿದ್ದುದರಿಂದ ತಾನೇ ಕಾರು ಚಲಾಯಿಸಿ ಮನೆಯಿಂದ ಹೊರಟೇ ಬಿಟ್ಟಳು.
ಆದಿತ್ಯವಾರವಾದುದ್ದರಿಂದ ಬೆಳಗ್ಗಿನ ಸಮಯದಲ್ಲಿ ಜನಸಂದಣಿ ಸ್ವಲ್ಪ ಕಡಿಮೆಯೇ ಇತ್ತು. ರೇಷ್ಮಾ ಚೌಪಾಟಿ ಬೀಚ್ ನ ಬಳಿ ಬಂದು ಚಾಂದಿನಿಗಾಗಿ ಕಾಯುತಿದ್ದಳು . ಒಂದೆರಡು ಬಾರಿ ಕರೆ ಮಾಡಿದರೂ ಚಾಂದಿನಿ ಉತ್ತರಿಸಲಿಲ್ಲ , ಬಂದ ದಾರಿಗೆ ಸುಂಕವಿಲ್ಲ ಎಂದು ಮನೆಯತ್ತ ದಾಪುಗಾಲು ಹಾಕುವಷ್ಟರಲ್ಲಿ ಚಾಂದಿನಿ ಬಂದೆ ಬಿಟ್ಟಳು. ಇಬ್ಬರೂ ತಮ್ಮಿಬ್ಬರ ಕುಶಲ ವಿಚಾರವನ್ನು ವಿನಿಮಯ ಮಾಡಿಕೊಂಡರು. ಏನೋ ರಹಸ್ಯದ ವಿಚಾರವನ್ನು ತಿಳಿಸಬೇಕೆಂದು ಹೇಳಿ ರೇಷ್ಮಾ ಚಾಂದಿನಿಯನ್ನು ಕರೆಸಿದ್ದಳು. ಆ ರಹಸ್ಯವು ಮುಕೇಶ್ ಮಿಲ್ ,ಕೊಲಾಬಾದಲ್ಲಿದೆಯೆಂದು ಹೇಳಿ ಆಕೆಯನ್ನು ಅಲ್ಲಿಂದ ೬ ಕಿಲೋ ಮೀಟರ್ ದೂರದಲ್ಲಿರುವ ಮುಕೇಶ್ ಮಿಲ್ ,ಕೊಲಾಬಾದ ಕಡೆ ಕರೆದೊಯ್ದಳು . ಮುಕೇಶ್ ಮಿಲ್ ೧೮೭೦ ರಲ್ಲಿ ಬೆಂಕಿ ಅನಾಹುತದಿಂದ ಧ್ವಂಸವಾಗಿತ್ತು , ತದ ನಂತರ ಅಲ್ಲಿಗೆ ಬರುತಿದ್ದ ಸಂದರ್ಶಕರಿಗೆ ಏನೋ ವಿಚಿತ್ರವಾದ ನೆರಳು ಕಂಡು ಬರುತಿತ್ತು ಎಂದು ಎನ್ನಲಾಗಿದೆ. ಇಲ್ಲಿ ಹಿಂದಿ ಸಿನಿಮಾವನ್ನೂ ತೆಗೆಯಲಾಗುತ್ತಿತ್ತು ಎನ್ನಲಾಗಿ, ಕೆಲ ಶೂಟಿಂಗನ್ನು ಅರ್ಧದಲ್ಲಿಯೇ ನಿಲ್ಲಿಸಲಾಗಿತ್ತು ಎನ್ನಲಾಗಿದೆ.ಹೀಗಾಗಿ ಅಲ್ಲಿಗೆ ಯಾರೂ ಹೋಗುತ್ತಿರಲಿಲ್ಲ. ರೇಷ್ಮಾ ಈ ಪಾಳುಬಿದ್ದ ಮನೆಯನ್ನು ಚಾಂದಿನಿಯ ವಧೆಗಾಗಿ ಮೀಸಲಿಟ್ಟಿದ್ದಳು.
ಅರ್ಧ ತಾಸಿನೊಳಗೆ ಇಬ್ಬರೂ ಆ ಪಾಳು ಬಿದ್ದ ಕಟ್ಟಡದೆಡೆಗೆ ಬಂದು ತಲುಪಿದರು. ಅದು ನೋಡಲು ಭೂತ ಬಂಗಲೆಯ ಹಾಗಿತ್ತು. ಆ ಪಾಳು ಬಿದ್ದ ಕಟ್ಟಡವನ್ನು ನೋಡಿ ಇವರಿಬ್ಬರೂ ಹೆದರಿಕೊಂಡಿದ್ದರು. ಆದರೂ ಚಾಂದಿನಿಗೆ ಆ ರಹಸ್ಯದ ಬಗ್ಗೆ ತಿಳಿದುಕೊಳ್ಳಬೇಕೆಂಬ ಕುತೂಹಲವಿತ್ತು.
ಆ ಕಟ್ಟಡದ ಸುತ್ತಲೂ ಕೊಳಕು ತುಂಬಿ ಮೂತ್ರಶಂಕೆಯ ದುರ್ನಾತವೂ ಮೂಗಿಗೆ ಹೊಡೆಯುತಿತ್ತು. ಆ ಅನಾಥವಾಗಿ ಬಿದ್ದಿರುವ ಕಟ್ಟಡದ ಮುರಿದು ಬಿದ್ದ ಮಹಾದ್ವಾರವನ್ನು ಪ್ರವೇಶಿಸುತ್ತಲೇ ಇಬ್ಬರ ಮೈ ಜುಮ್ಮೆನಿಸಿತು. ಇನ್ನೇನು ಕಟ್ಟಡದ ಒಳಹೋಗ ಬೇಕೆನ್ನುವಷ್ಟರಲ್ಲೇ ಅತ್ತ ಕಡೆಯಿಂದ ಹೆಗ್ಗಣಗಳ ಚೀರಾಟ ಕೇಳುತಿತ್ತು , ಇತ್ತ ಕಡೆಯಿಂದ ಬಾವಲಿಗಳ ಕೂಗಾಟ ಕೇಳುತಿತ್ತು , ಕಟ್ಟಡದ ಯಾವುದೊ ಮೂಲೆಯಿಂದ ಗೂಬೆಗಳ ಗೂ ಗೂ ಶಬ್ದವು ಕೇಳುತಿತ್ತು. ಇದೆಲ್ಲವನ್ನು ಆಲಿಸುತ್ತಲೇ , ಮುಂದೆ ನಡೆಯಬೇಕೋ , ಹಿಂದೆ ಓಡಬೇಕೋ ಎಂದು ತಿಳಿಯದೆ ತಟಸ್ಥವಾಗಿ ಅಲ್ಲೇ ನಿಂತು ಬಿಟ್ಟರು. ಆದರೆ ರೇಶ್ಮಾಳಿಗೆ ಚಾಂದಿನಿಯನ್ನು ಕೊಲ್ಲಬೇಕೆಂಬ ಛಲ , ಚಾಂದಿನಿಗೆ ರಹಸ್ಯವನ್ನು ಬೇಧಿಸುವ ಛಲ,ಹೀಗಾಗಿ ಇಬ್ಬರೂ ಆತ್ಮಸ್ಥೈರ್ಯವನ್ನು ಕಳಕೊಳ್ಳದೆ ಮುಂದೆ ನಡೆದರು. ಆ ಪಾಳುಬಿದ್ದ ಕಟ್ಟಡದೊಳಗೆ ಬೆಳಕೆಂಬುದು ಇರಲೇ ಇಲ್ಲ ,ದಿಕ್ಕು ತಪ್ಪಿ ಕತ್ತಲು ಕವಿದ ಕಾನನದೊಳಗೆ ಹೊಕ್ಕ ಕುರಿಗಳು ಹೆಬ್ಬುಲಿಗಳ ಬಾಯಿಗೆ ಸಿಕ್ಕಿ ವಿಲ ವಿಲ ಒದ್ದಾಡುವ ರೀತಿ ಈ ಎರಡು ಜೀವಗಳು ಉಸಿರುಗಟ್ಟಿ ನಿಂತಿದ್ದವು. ಅವರು ಅಲ್ಲಿ ಕಂಡಿದ್ದು ಕೆಲ ಮಾಂಸವಿಲ್ಲದ ಎಲುಬುಗಳನ್ನಷ್ಟೇ. ಇಬ್ಬರೂ ತುಸು ಮುಂದೆ ನಡೆದರು, ಅಲ್ಲೊಂದು ವಿಶಾಲವಾದ ಸಭಾಂಗಣದಂತಿದ್ದ ಜಾಗದಲ್ಲಿ ಇಬ್ಬರೂ ನಿಟ್ಟುಸಿರು ಬಿಟ್ಟು ಸ್ವಲ್ಪ ವಿರಾಮವನ್ನು ಪಡೆದರು. ಅದೇಕೋ ತನಗೆ ಮೂತ್ರವಿಸರ್ಜನೆ ಮಾಡಬೇಕೆಂದು ಹೇಳಿ ರೇಷ್ಮಾ ಅಲ್ಲಿಂದ ಕಾಲ್ಕಿತ್ತಳು. ಅಲ್ಲೇ ಇದ್ದ ಗೋಡೆಯ ಮರೆಯಲ್ಲಿ ನಿಂತು ಚಾಂದಿನಿಯ ಕಣ್ಣಿಗೆ ಬೀಳದಂತೆ ತನ್ನ ಬ್ಯಾಗಿನಿಂದ ತಂದೆಯ ಪಿಸ್ತೂಲನ್ನು ತೆಗೆದಳು . ಇನ್ನು ಚಾಂದಿನಿಗೆ ಗುಡ್ ಬೈ ಎಂದು ತನ್ನೊಳಗೆ ಹೇಳಿಕೊಂಡು ಪಿಸ್ತೂಲನ್ನು ಆಕೆಯ ಕಡೆಗೆ ತಿರುಗಿಸುತ್ತಲೇ ಏನೋ ಒಂದು ನೆರಳು ಆಕೆಯ ಸುತ್ತ ಚಲಿಸಿದ ಹಾಗೆ ಕಂಡಿತು.ಇದನ್ನು ಭ್ರಮೆ ಎಂದು ತಿಳಿದುಕೊಂಡ ಆಕೆ ಪಿಸ್ತೂಲಿನ ಟ್ರಿಗರ್ ಒತ್ತಿದಳು. ಆದರೆ ಅದರಿಂದ ಗುಂಡು ಹೊರಬರಲೇ ಇಲ್ಲ. ಇನ್ನೊಂದು ಸಲ ಪ್ರಯತ್ನಿಸಿದಳು , ಆದರೂ ಪ್ರಯೋಜನವಾಗಲಿಲ್ಲ. ಹಠಾತ್ತನೆ ಯಾರೋ ಆಕೆಯ ಸುಗಂಧಭರಿತ ಕೂದಲುಗಳನ್ನು ಎಳೆದಂತೆ ಭಾಸವಾಯಿತು, ಆದರೆ ಆಕೆಯ ಕಣ್ಣಿಗೆ ಏನೂ ಕಾಣದಂತಾಯಿತು.
ಗೋಡೆಯ ಮೇಲಿಂದ ತನ್ನ ಕೈಗೆ ಏನೋ ಅಂಟು ಅಂಟಾದ ದ್ರವ್ಯ ಬೀಳತೊಡಗಿತು. ಇದೇನೆಂದು ಮೇಲೆ ನೋಡುತ್ತಲೇ ಆಕೆಗೆ ಕಂಡಿದ್ದು ವಿಕಾರವಾದ ಮುಖ, ದೊಡ್ಡ ಗಾತ್ರದ ಆ ಎರಡು ಕಿವಿಗಳು , ಕತ್ತಲೆಯಲ್ಲೂ ಹೊಳೆಯುವ ಆ ಎರಡು ಕೋರೆ ಹಲ್ಲುಗಳು, ಇವೆಲ್ಲವನ್ನೂ ಕಂಡು ಮೂರ್ಛೆ ಹೋದಳು ರೇಷ್ಮಾ.
ಹೋದವಳು ಇನ್ನೂ ಬರಲಿಲ್ಲವೆಂದು ಚಾಂದಿನಿ ಆಕೆಯನ್ನು ಹುಡುಕುತ್ತ ಬಂದಳು, ಬಿದ್ದಿರುವ ರೇಷ್ಮಾಳನ್ನು ಕಂಡು ಹಾಗೂ ಆಕೆಯ ಕೈಯ್ಯಲ್ಲಿ ಇನ್ನೂ ಗಟ್ಟಿಯಾಗಿ ಹಿಡಿದಿದ್ದ ಪಿಸ್ತೂಲನ್ನು ನೋಡಿ ಹೆದರುತ್ತ ಗಲಿಬಿಲಿಗೊಂಡಳು. ಆಕೆಯ ಬ್ಯಾಗಿನಿಂದ ನೀರನ್ನು ತೆಗೆದು ರೇಷ್ಮಾಳ ಮುಖಕ್ಕೆ ಚಿಮ್ಮಿದಳು. ಒಂದೊಮ್ಮೆಲೇ ಎದ್ದೆಳುತ್ತ ತಾನು ಎಲ್ಲಿರುವೆನೆಂಬ ಪರಿಕಲ್ಪನೆಯಿಲ್ಲದೆ ಜೋರಾಗಿ ಕಿರುಚಿದಳು, ಆಕೆಯ ಕಿರುಚಾಟಕ್ಕೆ ಅಲ್ಲಿಯ ವಾಸಿಗಳಾದ ಬಾವಲಿಗಳು ರುದ್ರ ನರ್ತನವನ್ನು ಮಾಡಲು ಶುರು ಮಾಡಿದವು.ಇದೆಲ್ಲವನ್ನು ಗಮನಿಸುತ್ತಾ ತಾನ್ಯಾಕೆ ಈ ಮೃತ್ಯು ಕೂಪಕ್ಕೆ ಬಂದಿದ್ದೇನೋ ಎಂದೆಣಿಸಿ ಚಾಂದಿನಿಯನ್ನು ಅಲ್ಲೇ ಬಿಟ್ಟು ಹೊರ ಓಡಲು ಕಾಲ್ತೆಗೆದಳು .ಆಕೆಯನ್ನು ಅನುಸರಿಸುತ್ತ ಚಾಂದಿನಿಯು ಅವಳ ಹಿಂದೆಯೇ ಹೋದಳು. ಆದರೆ ಇಬ್ಬರಿಗೂ ದಿಕ್ಕು ತಪ್ಪಿದಂತಾಗಿ ತಾವೆಲ್ಲಿದ್ದೇವೋ ಎಂದು ತಿಳಿಯದೆ , ಬಂದ ದಾರಿಯನ್ನೂ ಮರೆತು ಕಂಗಾಲಾಗಿ ಹೋದರು. ಹೀಗಿರುವಾಗ ಕಟ್ಟಡದ ಒಂದು ಬಾಗಿಲಿನ ಎಡೆಯಿಂದ ಪ್ರಕಾಶಮಾನವಾದ ಬೆಳಕೊಂದು ಹರಿದುಬರುತ್ತಿದ್ದುದು ಕಂಡು ಬಂತು. ಅದನ್ನರಸುತ್ತಲೇ ಹೊರಹೋಗುವ ದಾರಿಸಿಕ್ಕಿತು ಎಂದು ಖುಷಿ ಪಡುತ್ತಾ ಮುಂದೆ ಸಾಗಿದರು, ಅದೇ ಸಮಯದಲ್ಲಿ ಚಾಂದಿನಿಯ ಮನದಲ್ಲಿ ಬಹಳಷ್ಟು ಪ್ರಶ್ನೆಗಳು ಮೂಡತೊಡಗಿದ್ದವು. ಹೊರ ಹೋದ ಮೇಲೆ ಎಲ್ಲವನ್ನು ತಿಳಿಯಬೇಕೆಂದು ಮುಂದೆ ಸಾಗುವಷ್ಟರಲ್ಲಿ ಭಯಂಕರವಾದ ಶಬ್ದವೊಂದು ಹಿಂದುಗಡೆಯಿಂದ ಕೇಳತೊಡಗಿತು.
Bạn đang đọc truyện trên: Truyen247.Pro