ಭಾಗ ೧ - ಜನನ
ಆತ ಧನಿಕ, ಆಸ್ತಿ ಅಂತಸ್ತಿಗೇನು ಕಮ್ಮಿಯಿಲ್ಲ. ೫೦ ವರುಷ ದುಡಿಯದಿದ್ದರೂ ಕುಳಿತು ತಿನ್ನುವಷ್ಟು ಸಿರಿವಂತಿಕೆ . ಆತನೇ ಆ ಮನೆಯ ಯಜಮಾನ ಆತನ ಹೆಸರು ಜೆರಾಲ್ಡ್. ಮೂರು ಮಕ್ಕಳ ತಂದೆ.ಆತನ ಏಕೈಕ ಪತ್ನಿಯ ಹೆಸರು ಹಸೀನಾ.ಅವರದ್ದು ಅಂತರ್ಜಾತೀಯ ವಿವಾಹ.ಈತ ಕ್ರಿಶ್ಚಿಯನ್ ಮತ್ತು ಆಕೆ ಮುಸ್ಲಿಂ. ಪ್ರೀತಿ ಮಾಡೋದಕ್ಕೆ ಜಾತಿ,ಲಿಂಗ,ಪ್ರಾಯ ಎಂಬ ಭೇದ ಭಾವವಿಲ್ಲ. ತಂದೆ ತಾಯಿಯ ಒಪ್ಪಿಗೆಯ ಮೇರೆಗೆ ಇವರಿಬ್ಬರ ಮದುವೆ ಮೇ ೨೦ ೧೯೯೪ ರಲ್ಲಿ ಆಯಿತು . ಇವರಿಬ್ಬರ ಪ್ರೀತಿಯ ಸಂಕೇತವಾಗಿ ಮೊದಲನೆಯ ಪುಟ್ಟ ಪೋರಿ ಈ ಪ್ರಪಂಚಕ್ಕೆ ಪ್ರವೇಶ ಕೊಟ್ಟಳು. ಈ ಧರೆಗೆ ಬೀಳುತ್ತಲೇ ಆಕೆಯ ಅಳಲು ಮನೆಯಲ್ಲಿ ಸಂತಸವನ್ನು ತುಂಬಿತು. ಅವರಿನ್ನೂ ಆಸ್ಪತ್ರೆಯಲ್ಲಿಯೇ ಇದ್ದರು, ತಂದೆಗೆ ಏನೋ ಅಸಂತೋಷ ಕಾಡುತಿತ್ತು. ಯಾರೊಂದಿಗೂ ಹೇಳಲಾಗದಷ್ಟು ಸಂಕಟ. ಆತನ ಮೌನದುಂಬಿದ ಮುಖವನ್ನು ನೋಡಿ ಹಸೀನಾ ಕೇಳಿಯೇಬಿಟ್ಟಳು, " ಯಾಕೆ ಇಷ್ಟೊಂದು ಸಪ್ಪಗೆ ಇದ್ದೀರಾ ? ಏನಾಯ್ತು? " . ಆತ ಏನೂ ಉತ್ತರಿಸದೆ ಸೀದಾ ಆಸ್ಪತ್ರೆಯಿಂದ ಹೊರ ನಡೆದ.
ಮೊದಲ ಮಗಳ ಜನನ ೦೫.೧೧.೧೯೯೬ ರಲ್ಲಿ ಆಯಿತು. ಬೆಳ್ಳನೆಯ ಮೈಕಟ್ಟು ಹೊಂದಿರುವ ಈ ಪುಟ್ಟ ಪೋರಿಯ ಹೆಸರು ರೇಷ್ಮಾ ಎಂದು ಇಡಲಾಯಿತು. ಮನೆ ತುಂಬಾ ಸಂಭ್ರಮದಾಚಾರಣೆ , ಆದರೆ ಜೆರಾಲ್ಡ್ ಇನ್ನೂ ತನ್ನ ಮೌನ ಮುರಿದಿಲ್ಲ . ತನ್ನ ಪತಿಯನ್ನು ನೋಡಿ ಹಸೀನಾಳಿಗೆ ಏನೋ ಅಸಮಾಧಾನ. ಬಾಡಿ ಹೋದ ಮುಖದಲ್ಲಿ ಆಕೆ ಮುಗುಳ್ನಗೆಯನ್ನು ಬಯಸುತ್ತಿದ್ದಳು . ತನ್ನ ಪತಿಯ ದುಃಖಕ್ಕೆ ಏನು ಕಾರಣ ಎಂಬುದನ್ನು ಆಕೆ ತಿಳಿಯಬೇಕಿತ್ತು.
ಸೂರ್ಯ ಪೂರ್ವದಿಂದ ಪಶ್ಚಿಮಕ್ಕೆ ಜಾರುತ್ತಿರುವಾಗಲೇ ಕೆಂಬಣ್ಣವು ಆಗಸವನ್ನು ಆವರಿಸಿತ್ತು , ಅವರಿರುವುದು ನಗರ ಪ್ರದೇಶವಾದುದರಿಂದ ಹಕ್ಕಿಗಳ ಇಂಚರ ಬಹಳಷ್ಟು ಕಡಿಮೆಯಾಗಿಯೇ ಇತ್ತು . ನಗರ ಪ್ರದೇಶದಲ್ಲಿ ಮರಗಳ ಸಂಖ್ಯೆ ಕಡಿಮೆಯಾದುದರ ಪರಿಣಾಮವಾಗಿ ಹಕ್ಕಿಗಳ ಸಂಖ್ಯೆ ಕ್ಷೀಣಿಸುತಿತ್ತು.
ಗಂಡನ ಮೌನಕ್ಕೆ ಏನು ಕಾರಣವೆಂಬುದನ್ನು ತಿಳಿಯಲೇ ಬೇಕೆಂದು ಆಕೆ ದೃಢ ನಿರ್ಧಾರ ಮಾಡಿದ್ದಳು. ಇಬ್ಬರೂ ಊಟ ಮಾಡಿ ಮಲಗಲು ಸಿದ್ಧರಾಗುವ ಸಮಯ. ಆಕೆ ಬಾಯಿ ತೆರೆದೇ ಬಿಟ್ಟಳು."ಇಂದಾದರೂ ಹೇಳಿ ನಿಮ್ಮ ಈ ಸಂಕಟಕ್ಕೆ ಏನು ಕಾರಣ? ನನ್ನಿಂದೇನಾದರೂ ತಪ್ಪಾಗಿದ್ದರೆ ಕ್ಷಮಿಸಿ " ಎಂದು ಹೇಳಿ ಗೊಳೋ ಎಂದು ಅತ್ತಳು. ಹಸೀನಾಳ ಬ್ರಹ್ಮಾಸ್ತ್ರಕ್ಕೆ ಸೋತ ಜೆರಾಲ್ಡ್ , ಇಷ್ಟು ದಿನ ತಡೆ ಹಿಡಿದಿದ್ದ ಮರ್ಮವನ್ನು ಬಿಡಿಸಿ ಹೇಳುತ್ತಲೇ ಹಸೀನಾಳಿಗೆ ೧೦೦೦ ವೋಲ್ಟ್ ಕರೆಂಟ್ ಮಯ್ಯಲ್ಲಿ ಹಾದಂತಾಯಿತು.
ಆತನಿಗೆ ಗಂಡು ಮಗು ಬೇಕೆಂಬ ಆಸೆಯಿತ್ತು.ತನ್ನ ವ್ಯವಹಾರಗಳನ್ನು ಗಂಡು ಮಗುವಾಗಿದ್ದರೆ ಆತನಿಗೆ ವಹಿಸಬಹುದಿತ್ತು , ಹೆಣ್ಣಾದರೆ ಮದುವೆಯಾಗಿ ತನ್ನ ಗಂಡನ ಮನೆ ಸೇರುತ್ತಾಳೆ. ಕೊನೆಗೆ ತನ್ನ ತಂದೆ ತಾಯಿಯನ್ನೇ ಮರೆಯುತ್ತಾಳೆ ಎಂದು ಹೇಳುತ್ತಾ ಹೆಣ್ಣು ಮಗು ಯಾಕಾದರು ಜನಿಸಿತೋ ಎಂದು ಗುಡುಗಿದನು. ಪತಿಯ ಮಾತುಗಳನ್ನು ಕೇಳಿದ ಆಕೆ ಸಿಂಹದ ಬಾಯಲ್ಲಿ ಸಿಕ್ಕ ಅಸಹಾಯಕ ಜಿಂಕೆಯಂತೆ ಕಂಡಳು.ತನ್ನ ಪತಿಯ ಮಾತುಗಳು ಆಕೆಯ ಮನದಲ್ಲಿ ಹಲವಾರು ಗೊಂದಲಗಳಿಗೆ ಎಡೆ ಮಾಡಿತು.ಆದರೂ ಧೈರ್ಯಗುಂದದೆ ಪತಿಯನ್ನು ಸಂತೈಸಿದಳು. ಜೆರಾಲ್ಡ್ ತನ್ನ ಪತ್ನಿಯ ಮಾತುಗಳನ್ನು ಕೇಳುವ ಸ್ಥಿತಿಯಲ್ಲಿರಲಿಲ್ಲ , ಆಕೆಯ ಮಾತುಗಳಿಗೆ ಗಮನ ಕೊಡದೆ ಮಂಚದ ಒಂದು ಕಡೆ ಮೋರೆಯ ಮಾಡಿ ಮಲಗಿದ , ನಿದ್ರಾದೇವಿಯು ಆತನನ್ನು ನಿಧಾನವಾಗಿ ಆವರಿಸಿದಳು.
ದಿನಗಳುರುಳಿದವು , ಪರಿಶುದ್ಧ ಮನಸ್ಸಿನ ಆ ಮಗುವಿನ ನಗು ಮನೆತುಂಬ ಸಂತೋಷವನ್ನು ತಂದಿಕ್ಕಿತು. ಗಂಡಾಗಲಿ , ಹೆಣ್ಣಾಗಲಿ ಅದೂ ಒಂದು ಜೀವವೇ ತಾನೇ. ಅದೆಷ್ಟೋ ತಂದೆ ತಾಯಂದಿರು ಮಕ್ಕಳಿಲ್ಲದೆ ಕೊರಗುತ್ತಾರೆ , ಮಕ್ಕಳಿಗಾಗಿ ಚಡಪಡಿಸುತ್ತಾರೆ. ಜೆರಾಲ್ಡ್ ತನ್ನ ಮಗಳ ಮೇಲೆ ಅಷ್ಟೊಂದು ಕಾಳಜಿ ತೋರಿಸದಿದ್ದರೂ ಮಗುವಿಗೆ ಬೇಕಾದ ಎಲ್ಲ ಸಾಮಾಗ್ರಿಗಳನ್ನೂ ತಂದಿರಿಸುತಿದ್ದ.
ದಿನಗಳುರುಳಿ ವರ್ಷಗಳಾದವು, ಮಗಳು ಚಟ ಚಟನೇ ತೊದಲು ನುಡಿಯನ್ನಾಡಲು ಶುರು ಮಾಡಿದಳು.ಮಗಳ ತೊದಲು ಮಾತುಗಳನ್ನು ಆಲಿಸಿ , ಆಕೆಯ ಪುಟ್ಟ ಪುಟ್ಟ ಹೆಜ್ಜೆಯನ್ನೋಡಿ, ಆ ಪುಟ್ಟ ಪುಟ್ಟ ಕೈಗಳ ಸ್ಪರ್ಶದಿಂದ ಜೆರಾಲ್ಡ್ ಗಂಡು ಹೆಣ್ಣು ಎಂಬುದನ್ನು ಮರೆತು ಮಗಳ ಜೊತೆ ತಾನು ಮಗುವಾಗಿ ಆಟವಾಡ ತೊಡಗಿದ.
ಮಗಳಿಗೀಗ ೨ ವರ್ಷ , ಇನ್ನೊಂದು ಜೀವ ತನ್ನ ಪತ್ನಿಯ ಹೊಟ್ಟೆಯಲ್ಲಿ ಬೆಳೆಯುತ್ತಿದೆ ಎಂಬುದನ್ನು ತಿಳಿದ ಜೆರಾಲ್ಡ್ನ ಸಂತೋಷಕ್ಕೆ ಪಾರವೇ ಇಲ್ಲ. ಈ ಭಾರಿ ತನಗೆ ಗಂಡು ಮಗುವನ್ನಿಕ್ಕಿ ಸಲಹು ದೇವಾ ಎಂದೆನ್ನುತ್ತಾ ದೇವರನ್ನು ಪರಿ ಪರಿಯಾಗಿ ಬೇಡುತಿದ್ದ. ಆದರೆ ಆತನ ಕರೆಯು ದೇವರಿಗೆ ತಲುಪಲಿಲ್ಲವೋ ಏನೋ , ದಂಪತಿಗಳಿಗೆ ಈ ಬಾರಿಯೂ ಹೆಣ್ಣು ಮಗುವಾಯಿತು. ಜೆರಾಲ್ಡ್ ಅಷ್ಟೇನೋ ನಿರಾಶನಾಗಲಿಲ್ಲ. ಇನ್ನೂ ತನಗೆ ಆಯುಷ್ಯವಿದೆ ಎಂದು ತನ್ನಷ್ಟಕ್ಕೆ ತಾನೇ ಅಂದು ಕೊಂಡು ತನ್ನನ್ನು ತಾನೇ ಸಮಾಧಾನ ಪಡಿಸುತಿದ್ದ. ಮಗಳಿಗೆ ರೀಮಾ ಎಂದು ಹೆಸರಿಟ್ಟರು. ಅಮ್ಮನನ್ನೇ ಹೋಲುವ ಆ ಮುಖ , ಹಸಿರು ಮಿಶ್ರಿತ ಆ ಕಣ್ಣು , ಗುಂಡು ಗುಂಡಾಗಿರುವ ಆ ಮುಗ್ಧ ಮಗುವಿನ ನಗು ಯಾರನ್ನೂ ಕೂಡ ಮನಸೂರೆಗೊಳಿಸುವಂತಿತ್ತು.
ಮೊದಲನೆಯ ಮಗಳಿಗೆ ೪ ವರುಷ ತುಂಬುತಿತ್ತು, ರೀಮಾಳ ವಯಸ್ಸು ೨ ವರುಷ ಆಗುತ್ತಿರುವಾಗೆಲೆ ಮೊಳಕೆಯೊಡೆದು ಗಿಡವಾಗಿ ಹೊರಬರಲು ತಯಾರಾಗುತ್ತಿದೆ ಇನ್ನೊಂದು ಜೀವ. ಹೌದು , ಹಸೀನಾ ಈಗ ೯ ತಿಂಗಳ ತುಂಬು ಗರ್ಭಿಣಿ. ಗಂಡು ಮಗು ಆಗಬೇಕೆಂಬ ಹಂಬಲದಿಂದ ಹಾತೊರಿಯುತ್ತಿರುವ ಜೆರಾಲ್ಡ್ ಗೆ ಆತನ ಇಚ್ಛೆ ನೆರವೇರುತ್ತೋ ಇಲ್ಲವೋ , ಆದರೆ ಜೆರಾಲ್ಡ್ ತುಂಬ ಸಂತೋಷಭರಿತನಾಗಿದ್ದಾನೆ , ವಂಶೋದ್ಧಾರಕ ಬಂದೆ ಬರುತ್ತಾನೆಂಬ ಧೃಡ ನಂಬಿಕೆಯಲ್ಲಿದ್ದಾನೆ.
Bạn đang đọc truyện trên: Truyen247.Pro